https://malnaddhvani.com

Thirthallinews shivamogganews localnews crimenews spots ripponpetenews hosangaranews sagaranews nrpuranews koppanews

ಶಿವಮೊಗ್ಗದಲ್ಲಿ ಗಾಂಜಾ ಮಾರಾಟ ಜಾಲದ ಮೇಲೆ ಪೊಲೀಸರ ದಾಳಿ: ಐವರು ಆರೋಪಿಗಳ ಬಂಧನ, 1.230 ಕೆ.ಜಿ. ಗಾಂಜಾ ವಶ

ಶಿವಮೊಗ್ಗ: ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ತುಂಗಾನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಗಳಿಂದ ₹61,500 ಮೌಲ್ಯದ 1 ಕೆ.ಜಿ. 230 ಗ್ರಾಂ ಗಾಂಜಾ ಹಾಗೂ ಮಾರಾಟದಿಂದ ಬಂದಿದ್ದ ₹400 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗದ ಹಾಲೂರು–ಅನುಪಿನಕಟ್ಟೆ ಮುಖ್ಯ ರಸ್ತೆಯ ತುಂಗಾ ಮೇಲ್ದಂಡೆ ಕಾಲುವೆ ಸಮೀಪ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ತುಂಗಾನಗರ ಪೊಲೀಸ್ ಠಾಣೆಯ ಪಿಎಸ್ಐ ರಘುವೀರ್ ಎಂ. ಅವರಿಗೆ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಅವರು ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ತೆರಳಿ ದಿಢೀರ್ ದಾಳಿ ನಡೆಸಿದರು. ಕಾರ್ಯಾಚರಣೆಯಲ್ಲಿ ಗಾಂಜಾ ಮಾರಾಟದ ಆರೋಪದ ಮೇಲೆ ಐವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ವಸೀಂ ಅಕ್ರಮ್ (24), ನದೀಮ್ (21), ನಾಸೀರ್ ಶೇಖ್ (20), ಹರ್ಷದ್ ವುಲ್ಲಾ (21) ಹಾಗೂ ಶಾಹೀದ್ ಖಾನ್ (26) ಎಂದು ಗುರುತಿಸಲಾಗಿದೆ..

ದಾಳಿಯ ಸಂದರ್ಭದಲ್ಲಿ ಒಟ್ಟು ₹61,500 ಮೌಲ್ಯದ 1 ಕೆ.ಜಿ. 230 ಗ್ರಾಂ ಗಾಂಜಾ ಹಾಗೂ ₹400 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನಗರದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಕೈಗೊಂಡಿರುವ ಈ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ.

Leave a Reply

Your email address will not be published. Required fields are marked *