
ತೀರ್ಥಹಳ್ಳಿ: ಸಾರ್ವಜನಿಕರು ತಮ್ಮ ಒಂದು ಅರ್ಜಿಯ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಹತ್ತಾರು ಬಾರಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಬೇಕು ಎಂದು ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥ್ ಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ತೀರ್ಥಹಳ್ಳಿಯ ಗ್ರಾಮೀಣ ಅಭಿವೃದ್ಧಿ ಭವನದಲ್ಲಿ ನಡೆದ ಕಸಬಾ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವುದು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯ ಕರ್ತವ್ಯವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾಸೇವಾ ಆಂದೋಲನದ ಉದ್ದೇಶವೇ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ಹಾಗೂ ತ್ವರಿತವಾಗಿ ತಲುಪಿಸುವುದಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶಯದಂತೆ ರಾಜ್ಯಾದ್ಯಂತ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಜನರು ತಮ್ಮ ಕೆಲಸಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.ತಾಲ್ಲೂಕು ಕಚೇರಿ ಸೇರಿದಂತೆ ಯಾವುದೇ ಸರ್ಕಾರಿ ಇಲಾಖೆಗೆ ಸಾರ್ವಜನಿಕರು ತಮ್ಮ ಸಮಸ್ಯೆ ಅಥವಾ ಅರ್ಜಿಯೊಂದಿಗೆ ಬಂದಾಗ, ಅಧಿಕಾರಿಗಳು ಅವರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಬೇಕು. ನಿಯಮಾನುಸಾರ ಸಾಧ್ಯವಾದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಒಂದೇ ಕೆಲಸಕ್ಕಾಗಿ ಸಾರ್ವಜನಿಕರನ್ನು ಪದೇಪದೇ ಕಚೇರಿಗೆ ಕರೆಸಿಕೊಳ್ಳುವುದು ಅಥವಾ ಅನಗತ್ಯವಾಗಿ ವಿಳಂಬ ಮಾಡುವುದು ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್, ಇಒ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜನರ ಸೇವೆ ಮಾಡಲು ಇಷ್ಟವಿಲ್ಲದ ಅಧಿಕಾರಿಗಳು ತಾವೇ ಹೊರಗಡೆ ಹೋಗಲಿ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಇಲ್ಲಿಂದ ಹೊರಗಡೆ ಕಳುಹಿಸುವುದು ನಮಗೆ ದೊಡ್ಡ ವಿಷಯವೇನಲ್ಲ” ಎಂದು ಡಾ. ಮಂಜುನಾಥ್ ಗೌಡ ಅವರು ಖಡಕ್ ಎಚ್ಚರಿಕೆ ನೀಡಿದರು.
ಸೆ. 19ರಂದು ತೀರ್ಥಹಳ್ಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ 19ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀರ್ಥಹಳ್ಳಿಗೆ ಆಗಮಿಸಿ ಪಶ್ಚಿಮಘಟ್ಟದ ರೈತರೊಂದಿಗೆ ಕಸ್ತೂರಿರಂಗನ್ ವರದಿ ಕುರಿತು ನೇರವಾಗಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಡಾ. ಮಂಜುನಾಥ್ ಗೌಡ ಮಾಹಿತಿ ನೀಡಿದರು.ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ಅವರು ತೀರ್ಥಹಳ್ಳಿಗೆ ಆಗಮಿಸುತ್ತಿದ್ದು, ರೈತರೊಂದಿಗೆ ನೇರ ಸಂವಾದ ನಡೆಸಲು ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.ತಮ್ಮ ಮನವಿ ಹಾಗೂ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯ ಮನವಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತೀರ್ಥಹಳ್ಳಿಗೆ ಆಗಮಿಸುತ್ತಿದ್ದು, ಕಸ್ತೂರಿರಂಗನ್ ವರದಿಯಿಂದ ಮಲೆನಾಡು ಹಾಗೂ ಪಶ್ಚಿಮಘಟ್ಟದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಆತಂಕಗಳ ಕುರಿತು ರೈತರ ಅಭಿಪ್ರಾಯಗಳನ್ನು ಆಲಿಸಲಿದ್ದಾರೆ ಎಂದು ತಿಳಿಸಿದರು.ಕಸ್ತೂರಿರಂಗನ್ ವರದಿ ವಿಚಾರವಾಗಿ ರಾಜ್ಯ ವಿಧಾನಸಭೆಯಲ್ಲಿ ಮೂರು ದಿನಗಳ ಚರ್ಚೆಗೆ ಅವಕಾಶ ಕಲ್ಪಿಸಿರುವುದು ಕೂಡ ಗಮನಾರ್ಹ ಸಂಗತಿಯಾಗಿದೆ. ಮಲೆನಾಡಿನ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಡೆಯಲಿರುವ ಮುಖ್ಯಮಂತ್ರಿ ಅವರ ರೈತ ಸಂವಾದ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಸೇರಿದಂತೆ ವಿವಿಧ ತಾಲೂಕುಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಡಾ. ಮಂಜುನಾಥ್ ಗೌಡ ಕರೆ ನೀಡಿದರು.
ಅಧಿಕಾರಿಗಳಿಗೆ ಅಗತ್ಯ ಸಿದ್ಧತೆಗೆ ಸೂಚನೆ
ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಕಾರ್ಯಕ್ರಮಕ್ಕೆ ಸಜ್ಜಾಗಿರಬೇಕು ಎಂದು ಸೂಚಿಸಿದರು.ರೈತರ ಸಮಸ್ಯೆಗಳು, ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದ ಮಾಹಿತಿಗಳು ಹಾಗೂ ಇಲಾಖಾವಾರು ವಿವರಗಳನ್ನು ಅಧಿಕಾರಿಗಳು ಸಿದ್ಧವಾಗಿಟ್ಟುಕೊಳ್ಳಬೇಕು. ರೈತರು ತಮ್ಮ ಸಮಸ್ಯೆಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾಪಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳು ವಾಸ್ತವಾಂಶಗಳೊಂದಿಗೆ ಸ್ಪಂದಿಸಲು ಸಿದ್ಧರಾಗಿರಬೇಕು ಎಂದು ಹೇಳಿದರು.“ಜನರ ಸೇವೆ ಮಾಡುವುದು ಅಧಿಕಾರಿಗಳ ಕರ್ತವ್ಯ. ರೈತರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ. ಸೆ. 19ರಂದು ನಡೆಯಲಿರುವ ಮುಖ್ಯಮಂತ್ರಿ ಅವರ ರೈತ ಸಂವಾದ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು” ಎಂದು ಡಾ. ಆರ್.ಎಂ. ಮಂಜುನಾಥ್ ಗೌಡ ಹೇಳಿದರು.ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಬಳ ಸಚಿಂದ್ರ ಹೆಗ್ಡೆ, ತೀರ್ಥಹಳ್ಳಿ ಹಾಗೂ ಹೊಸನಗರ ತಹಸೀಲ್ದಾರರು, ಇಒ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply