
ಶಿಕಾರಿಪುರದಲ್ಲಿ ಮೊಳಗಿದ ‘ಭಾರತ್ ಜೋಡೋ’ ಘೋಷಣೆ; 2.0 ಪಾದಯಾತ್ರೆಗೆ ಸಜ್ಜಾದ ಕಾಂಗ್ರೆಸ್..!
ಶಿಕಾರಿಪುರ : ಐತಿಹಾಸಿಕ ‘ಭಾರತ್ ಜೋಡೋ’ ಪಾದಯಾತ್ರೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕುತ್ತಾ, ಶಿಕಾರಿಪುರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ‘ಭಾರತ್ ಜೋಡೋ 2.0’ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಸಿದ್ಧತೆ ಭರದಿಂದ ಸಾಗಿತು.ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ‘ಭಾರತ್ ಜೋಡೋ’ ಪಾದಯಾತ್ರೆ 2022ರ ಸೆಪ್ಟೆಂಬರ್ 30ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿತ್ತು

ಈ ಐತಿಹಾಸಿಕ ದಿನಕ್ಕೆ ನಾಲ್ಕು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಶಿಕಾರಿಪುರದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ.ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶಿಕಾರಿಪುರ ತಾಲ್ಲೂಕಿನ ಕಿಟ್ಟದಹಳ್ಳಿಯಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಹೆಜ್ಜೆ ಹಾಕಲಿರುವ ಪಾದಯಾತ್ರೆ ಶಿಕಾರಿಪುರ ಪಟ್ಟಣದ ಹೊಸ ಸಂತೆ ಮೈದಾನ ತಲುಪಲಿದ್ದು, ಅಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

ಕಾರ್ಯಕ್ರಮದ ಸಿದ್ಧತೆಗಳ ಭಾಗವಾಗಿ ಶಿಕಾರಿಪುರದಲ್ಲಿ ಸಮಾವೇಶ ನಡೆಯಲಿರುವ ಸ್ಥಳವನ್ನು ಪರಿಶೀಲಿಸಲಾಯಿತು. ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ರೂಪುರೇಷೆ, ಪಾದಯಾತ್ರೆಯ ಮಾರ್ಗ ಹಾಗೂ ಸಮಾವೇಶದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲಾಯಿತು.ಐತಿಹಾಸಿಕ ‘ಭಾರತ್ ಜೋಡೋ’ ಯಾತ್ರೆಯ ಸಂದೇಶವನ್ನು ಮತ್ತೊಮ್ಮೆ ಜನರಿಗೆ ತಲುಪಿಸುವ ಉದ್ದೇಶದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸಜ್ಜಾಗಿದ್ದು, ಶಿಕಾರಿಪುರದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿವೆ.‘ಭಾರತ್ ಜೋಡೋ’ ನೆನಪು… ಶಿಕಾರಿಪುರದಿಂದ ಮತ್ತೊಂದು ಹೆಜ್ಜೆ — ‘ಭಾರತ್ ಜೋಡೋ 2.0’!


Leave a Reply