
ತುರ್ತು ಸಂದರ್ಭದಲ್ಲಿ ರೋಗಿ ಸಾಗಾಟಕ್ಕೆ ನಿರಾಕರಣೆ ಆರೋಪ – ಸ್ಥಳೀಯರ ಆಕ್ರೋಶ
ಹೊಸನಗರ: ಹಾವು ಕಡಿತಕ್ಕೊಳಗಾದ ರೈತನೊಬ್ಬನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರೆಫರ್ ಮಾಡಿದ ಸಂದರ್ಭದಲ್ಲಿ 108 ಆಂಬುಲೆನ್ಸ್ ಸೇವೆ ಕುರಿತು ಉಂಟಾದ ಗೊಂದಲದಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹೊಸನಗರ ತಾಲ್ಲೂಕಿನ ನಗರ ಸಮೀಪ ನಡೆದಿದೆ.

ನಗರ ಸಮೀಪದ ಕರಿಮನೆ ಕಾಡಿಗಿರೆ ಗ್ರಾಮದ ಉಮೇಶ್ ಎಂಬವರು ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ವೇಳೆ ನಾಗರಹಾವು ಕಡಿದಿದೆ ಎನ್ನಲಾಗಿದೆ. ಹಾವು ಕಡಿತಕ್ಕೊಳಗಾದ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೊಸನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು
ಆದರೆ ಉಮೇಶ್ ಅವರ ಆರೋಗ್ಯ ಸ್ಥಿತಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ವೈದ್ಯರು ಅವರನ್ನು ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರೋಗಿಯನ್ನು ಶಿವಮೊಗ್ಗಕ್ಕೆ ಕರೆದೊಯ್ಯಲು 108 ಆಂಬುಲೆನ್ಸ್ ಆಗಮಿಸಿತ್ತು.
ಈ ವಿಚಾರ ತಿಳಿದು ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ನಗರದಿಂದ ರೈತನೊಂದಿಗೆ ಬಂದಿದ್ದ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕ ರಾಜೇಶ್ ಹಿರಮನೆ, ನಿತಿನ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿ, ತುರ್ತು ಪರಿಸ್ಥಿತಿಯಲ್ಲಿರುವ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗೆ ವಿಳಂಬ ಮಾಡದೆ ಕರೆದೊಯ್ಯಬೇಕು ಎಂದು ಒತ್ತಾಯಿಸಿದರು.

ಹಾವು ಕಡಿತದಂತಹ ತುರ್ತು ಪರಿಸ್ಥಿತಿಯಲ್ಲಿ ಪ್ರತಿಯೊಂದು ನಿಮಿಷವೂ ಮಹತ್ವದ್ದಾಗಿರುವ ಸಂದರ್ಭದಲ್ಲಿ, ರೆಫರ್ ಆಗಿರುವ ರೋಗಿಯನ್ನು ಸಾಗಿಸುವ ವಿಚಾರದಲ್ಲೇ ಗೊಂದಲ ಉಂಟಾಗಿರುವುದು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಾರ್ವಜನಿಕರ ಒತ್ತಾಯದ ಬಳಿಕ ಅಂತಿಮವಾಗಿ ಉಮೇಶ್ ಅವರನ್ನು 108 ಆಂಬುಲೆನ್ಸ್ ಮೂಲಕ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.
ರೋಗಿಯ ಜೀವಕ್ಕೆ ಸಂಬಂಧಿಸಿದ ತುರ್ತು ಸಂದರ್ಭಗಳಲ್ಲಿ ನಿಯಮಗಳ ಹೆಸರಿನಲ್ಲಿ ಗೊಂದಲಕ್ಕೆ ಅವಕಾಶವಿಲ್ಲದಂತೆ ಸ್ಪಷ್ಟ ಮಾರ್ಗಸೂಚಿ ಹಾಗೂ ಜವಾಬ್ದಾರಿಯುತ ಸೇವೆ ಅಗತ್ಯ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.ಈ ಘಟನೆಗೆ ಸಂಬಂಧಿಸಿದಂತೆ 108 ಸೇವೆಯ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಹಾಗೂ ಘಟನೆ ಸಂದರ್ಭದಲ್ಲಿ ನಿಯಮಾನುಸಾರವೇ ಕಾರ್ಯನಿರ್ವಹಿಸಲಾಗಿತ್ತೇ ಎಂಬುದನ್ನು ಪರಿಶೀಲಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ
ತುರ್ತು ಪರಿಸ್ಥಿತಿಯಲ್ಲಿದ್ದ ರೋಗಿಯನ್ನು ಸಾಗಿಸುವ ವಿಚಾರದಲ್ಲಿ ಉಂಟಾದ ಈ ಗೊಂದಲದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ? 108 ಸಿಬ್ಬಂದಿಯ ನಡೆ ಕುರಿತು ತನಿಖೆ ನಡೆಯುತ್ತದೆಯೇ? ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Leave a Reply