
ನಾಲ್ಕೂವರೆ ದಶಕಗಳ ಸತ್ಯನಿಷ್ಠ ಪತ್ರಿಕೋದ್ಯಮಕ್ಕೆ ಗೌರವ; ಪತ್ರಕರ್ತರು ಸಮಾಜಕ್ಕೆ ದಾರಿದೀಪವಾಗಬೇಕು: ಶಿವಾನಂದ ತಗಡೂರು
ಕೊಪ್ಪ: ನಾಲ್ಕೂವರೆ ದಶಕಗಳಿಗೂ ಅಧಿಕ ಕಾಲ ಜನಪರ, ನಿಷ್ಪಕ್ಷಪಾತ ಹಾಗೂ ಸತ್ಯನಿಷ್ಠ ಪತ್ರಿಕೋದ್ಯಮದ ಮೂಲಕ ಸಮಾಜದ ಧ್ವನಿಯಾಗಿ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ಹಾಗೂ ತುಂಗಾವಾರ್ತೆ ವಾರಪತ್ರಿಕೆಯ ಸಂಪಾದಕ ಡಿ.ಎಸ್. ವಿಶ್ವನಾಥ್ ಶೆಟ್ಟಿ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪ ತಾಲ್ಲೂಕು ಘಟಕದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು
.ಪಟ್ಟಣದ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಜನನಾಯಕ ದಿವಂಗತ ಹೆಚ್.ಜಿ. ಗೋವಿಂದಗೌಡ ಅವರ ಶತಮಾನೋತ್ಸವ ಸ್ಮರಣಾ ಕಾರ್ಯಕ್ರಮದಲ್ಲಿ ವಿಶ್ವನಾಥ್ ಶೆಟ್ಟಿ ಅವರ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಸೇವೆಯನ್ನು ಸ್ಮರಿಸಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.

ಅಭಿನಂದನಾ ಪತ್ರದಲ್ಲಿ 1959ರ ಡಿಸೆಂಬರ್ 14ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕುಂಬಾರಕೊಪ್ಪ ಗ್ರಾಮದ ದೋನ್ಸೆಯಲ್ಲಿ ಜನಿಸಿದ ಡಿ.ಎಸ್. ವಿಶ್ವನಾಥ್ ಶೆಟ್ಟಿ ಅವರು ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಬಿ.ಎಸ್‌ಸಿ. ಪದವಿ ಪೂರ್ಣಗೊಳಿಸಿ, 1981ರಲ್ಲಿ ತುಂಗಾವಾರ್ತೆ ವಾರಪತ್ರಿಕೆಯನ್ನು ಆರಂಭಿಸಿದ ಬಗ್ಗೆ ಉಲ್ಲೇಖಿಸಲಾಯಿತು.

ನಾಲ್ಕೂವರೆ ದಶಕಗಳಿಗೂ ಹೆಚ್ಚು ಕಾಲ ಯಾವುದೇ ರಾಜಿಯಿಲ್ಲದೆ ಜನಪರ ಪತ್ರಿಕೋದ್ಯಮ ನಡೆಸಿ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಹಾಗೂ ತೀರ್ಥಹಳ್ಳಿ ಭಾಗದ ಜನರ ವಿಶ್ವಾಸ ಗಳಿಸಿರುವ ಅವರ ಸೇವೆಯನ್ನು ಪ್ರಶಂಸಿಸಲಾಯಿತು.ಪತ್ರಿಕೋದ್ಯಮದ ಜೊತೆಗೆ ಸಾರ್ವಜನಿಕ ಜೀವನದಲ್ಲಿಯೂ ಸಕ್ರಿಯರಾಗಿರುವ ಅವರು ಆರು ಬಾರಿ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದು, ಹರಿಹರಪುರ ಮಂಡಲ ಪಂಚಾಯಿತಿ ಉಪಪ್ರಧಾನ, ಹಿರೇಕೊಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ತಾಲ್ಲೂಕು ಭೂ ನ್ಯಾಯ ಮಂಡಳಿ ಸದಸ್ಯ, ಜಲಾನಯನ ಸಮಿತಿ ಅಧ್ಯಕ್ಷ, ತೀರ್ಥಹಳ್ಳಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಪುರಸಭಾ ಸದಸ್ಯ, ಪಿ.ಸಿ.ಎ.ಆರ್.ಡಿ. ಬ್ಯಾಂಕ್ ನಿರ್ದೇಶಕ ಸೇರಿದಂತೆ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿರುವುದನ್ನು ಅಭಿನಂದನಾ ಪತ್ರದಲ್ಲಿ ವಿಶೇಷವಾಗಿ ಉಲ್ಲೇಖಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ಸಮಾಜಕ್ಕೆ ದಾರಿದೀಪವಾಗಬೇಕು. ಯಾವುದೇ ಸುದ್ದಿಯನ್ನು ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆ ಪರಿಶೀಲಿಸುವುದು ಪತ್ರಕರ್ತನ ಧರ್ಮವಾಗಿದ್ದು, ಸಂಚಲನಕ್ಕಾಗಿ ಅಥವಾ ವೈಯಕ್ತಿಕ ಹಿತಾಸಕ್ತಿಗಾಗಿ ಯಾರಿಗೂ ಅನ್ಯಾಯವಾಗುವ ರೀತಿಯ ಸುದ್ದಿಗಳನ್ನು ಪ್ರಕಟಿಸಬಾರದು ಎಂದು ಕರೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಹೆಚ್.ಬಿ. ಮದನ್ ಗೌಡ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸದ ಹಾಗೂ ಸುಳ್ಳು ಸುದ್ದಿಗಳು ವೇಗವಾಗಿ ಹರಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ದೃಢೀಕರಿಸಿದ ಹಾಗೂ ನೈಜ ಮಾಹಿತಿಯನ್ನು ಮಾತ್ರ ಜನರಿಗೆ ತಲುಪಿಸುವುದು ಪತ್ರಕರ್ತರ ಹೊಣೆಗಾರಿಕೆ ಎಂದರು. ಸಂಘದ ಸದಸ್ಯರಿಗೆ ನಿವೃತ್ತಿ ವೇತನ, ಆರೋಗ್ಯ ವಿಮೆ, ಬಸ್ ಪಾಸ್ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಸಂಘ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕೊಪ್ಪ ಕಾರ್ಯನಿರತ ಪತ್ರಕರ್ತರ ಸಂಘದ ಕಾನೂನು ಸಲಹೆಗಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ದಿವಂಗತ ಹೆಚ್.ಜಿ. ಗೋವಿಂದಗೌಡ ಅವರ ಸತ್ಯನಿಷ್ಠ ಹಾಗೂ ಜನಪರ ರಾಜಕೀಯ ಇಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದು ಹೇಳಿದರು.ಹಿರಿಯ ಪತ್ರಕರ್ತ ಅರವಿಂದ ಚೊಕ್ಕಾಡಿ ಮಾತನಾಡಿ, ಟಿಆರ್‌ಪಿ ಮತ್ತು ವೀಕ್ಷಕರ ಸಂಖ್ಯೆಯ ಹೆಸರಿನಲ್ಲಿ ಅಪೂರ್ಣ ಹಾಗೂ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವುದು ಪತ್ರಿಕೋದ್ಯಮದ ಮೌಲ್ಯಗಳಿಗೆ ವಿರುದ್ಧವಾಗಿದೆ. ನೈಜ, ಪರಿಶೀಲಿತ ಹಾಗೂ ಜವಾಬ್ದಾರಿಯುತ ಸುದ್ದಿಗಳೇ ಪತ್ರಿಕೋದ್ಯಮದ ನಿಜವಾದ ಶಕ್ತಿಯಾಗಿವೆ ಎಂದು ಅಭಿಪ್ರಾಯಪಟ್ಟರು
.ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ್ ಅನಿಲ್, ಕೊಪ್ಪ ತಾಲ್ಲೂಕು ಅಧ್ಯಕ್ಷ ಜಿನೇಶ್ ಇರ್ವತ್ತೂರು, ಪದಾಧಿಕಾರಿಗಳು, ಪತ್ರಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Leave a Reply